ಕನ್ನಡ ಹೀಗಿರಲಿ...
ಮೊದಲಿಗೆ ನಿಮಗೆ ಶರಣು! ಮತ್ತೆ ನಿಮಗೆಲ್ಲ ಸ್ವಾಗತ. ಇಲ್ಲಿ ನಾನು ಕನ್ನಡ ಲಿಪಿ ಸುಧಾರಣೆ ಬಗೆಗೆ ನನ್ನ ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೊಳ್ಳ ಬಯಸುತ್ತೇನೆ. ಇದನ್ನು 2 ಹಂತಗಳಲ್ಲಿ ಯೋಜಿಸಿದ್ದೇನೆ. ನಿಧಾನವಾಗಿ ಓದಿ. ನಿಮ್ಮ ಅನಿಸಿಕೆ ಗಳನ್ನು ಪತ್ರ/ಇ-ಅಂಚೆ, ವೃತ್ತಪತ್ರಿಕೆ, ದೂರದರ್ಶನ ಮೊದಲಾದ ಮಾಧ್ಯಮಗಳಲ್ಲಿ ಹಾಗೂ ನಿಮ್ಮ ಬಂಧು ಮಿತ್ರರಲ್ಲಿ ಹಂಚಿಕೊಳ್ಳಿ. 
ಆರಂಭ 
ಕನ್ನಡವು ಒಂದು ಸುಂದರ ಭಾಷೆ. ಮಾತು ಮಾತ್ರವೇ ಅಲ್ಲ, ಬರಹ ಕೂಡ ಮುದ್ದಾಗಿದೆ. ಕಣ್ಣು ಮತ್ತು ಕಿವಿ ಎರಡಕ್ಕೂ ಸಂತಸ ನೀಡುತ್ತದೆ. ಕನ್ನಡ ಕಲಿಕೆಯೂ ಕೂಡ ಸರಳ ಹಾಗೂ ಸುಲಭ. ಅಲ್ಲದೆ ಹೇಳಿದಂತೆ ಬರೆಯಬಲ್ಲ, ಬರೆದಂತೆ ಓದಬಲ್ಲ ಭಾಷೆ. ಕನ್ನಡದಲ್ಲಿ ಸುಮಾರು 50 (49 ಬಳಕೆಯಲ್ಲಿವೆ) ಅಕ್ಷರಗಳು, ಅಷ್ಟೇ ಸಂಖ್ಯೆಯ ಗುಣಿತಾಕ್ಷರ ಮತ್ತು ಒತ್ತಕ್ಷರಗಳಿವೆ. ಇವುಗಳ ಸಂಖ್ಯೆಯನ್ನು ಮಿತಿಗೊಳಿಸಿ ಲಿಪಿ ಸುಧಾರಿಸಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ. ಇದನ್ನು 2 ಹಂತದಲ್ಲಿ ಮಾಡಬಯಸುತ್ತೇನೆ. 
1. ಒತ್ತಕ್ಷರಗಳನ್ನು ಕೈಬಿಡುವುದು. 
ಇದಕ್ಕೆ ಪ್ರೇರಣೆ ದೊರೆತಿದ್ದು ತಮಿಳಿನಿಂದ. ತಮಿಳಿನಲ್ಲಿ ಒತ್ತಕ್ಷರಗಳಿಲ್ಲ. ಬದಲಿಗೆ ಅರ್ಧಾಕ್ಷರಗಳನ್ನು ಬಳಸುತ್ತಾರೆ (ಅಂದರೆ ವ್ಯಂಜನಗಳ ಮೂಲರೂಪ). ಕನ್ನಡದಲ್ಲೂ ಇದನ್ನು ಬಳಸಬಹುದಾದರೆ ಅದಕ್ಕೊಂದು ವಿಶೇಷತೆ ಬರುತ್ತದೆ. ಎಷ್ಟೋ ಬಾರಿ ಒಂದು ಪದವನ್ನು ಉಚ್ಚರಿಸುವುದು ಹೇಗೆಂಬ ಸಂದೇಹ ಬರಬಹುದು. ಉದಾ: “ಆಮ್ಲ”. ಇಲ್ಲಿ ‘ಲ’ ಅಕ್ಷರವೇ ಇಲ್ಲ. ಬದಲಿಗೆ, “ಆಮ್‌ಲ” ಎಂದು ಬರೆದರೆ ಸುಲಭವಾಗಿ ಗುರುತಿಸಬಹುದಲ್ಲವೆ? ಇದೇ ರೀತಿ ಉಳಿದ ಪದಗಳನ್ನು ಬರೆಯಬಹುದು. ಕರ್ಪೂರ >> ಕರ್‌ಪೂರ, ತರ್ಜುಮೆ >> ತರ್‌ಜುಮೆ, ರಾಷ್ಟ್ರ >> ರಾಷ್‌ಟ್‌ರ, ಇತ್ಯಾದಿ. ಕನ್ನಡದಲ್ಲಿ 49 ಅಕ್ಷರಗಳಿವೆ. ಸ್ವರಗಳು-16, ವ್ಯಂಜನಗಳು-34 (ವರ್ಗೀಯ-25, ಅವರ್ಗೀಯ-9). ಸ್ವರಗಳು ಪೂರ್ಣಾಕ್ಷರಗಳು. ಅವುಗಳಿಗೆ ಸ್ವತಂತ್ರ ಉಚ್ಚಾರಣೆಯಿದೆ. ಆದರೆ, ವ್ಯಂಜನಗಳು ಅರ್ಧಾಕ್ಷರಗಳು. ಈ ಅರ್ಧಾಕ್ಷರಗಳು ‘ ್ ’ ಚಿಹ್ನೆಯಿಂದ ಕೂಡಿರುತ್ತವೆ. ಇವು ಸ್ವರಗಳೊಂದಿಗೆ ಸೇರಿ ಪೂರ್ಣಾಕ್ಷರಗಳಾಗುತ್ತವೆ. ಉದಾ: ಕ್+ಅ=ಕ, ಕ್+ಆ=ಕಾ, ಕ್+ಇ=ಕಿ, ಕ್+ಈ=ಕೀ, ಇತ್ಯಾದಿ. ಈ ಪ್ರಕ್ರಿಯೆಗೆ ‘ಕಾಗುಣಿತ’ ಅಥವ ‘ಗುಣಿತಾಕ್ಷರ’ ಎನ್ನುತ್ತೇವೆ. ಇದೇ ರೀತಿ ವ್ಯಂಜನಕ್ಕೆ ವ್ಯಂಜನ ಸೇರಿದಾಗ ‘ಒತ್ತಕ್ಷರ’ ಅಥವ ‘ಸಂಯುಕ್ತಾಕ್ಷರ’ಗಳಾಗುತ್ತವೆ. ಉದಾ: ಜ್+ಜ=ಜ್ಜ, ಕ್+ಕ=ಕ್ಕ, ತ್+ತ=ತ್ತ, ಇತ್ಯಾದಿ. ವ್ಯಂಜನಗಳು ಎಷ್ಟಿವೆಯೋ ಅಷ್ಟೇ ಸಂಖ್ಯೆಯ ಒತ್ತಕ್ಷರಗಳಿವೆ. ಅವುಗಳಲ್ಲೂ ಮೂರು ವರ್ಗಗಳನ್ನು ಕಾಣಬಹುದು. 
1. ಮೂಲ ಅಕ್ಷರಗಳಂತೆ- ಜ್ಜ, ಣ್ಣ, ವ್ವ, ಇತ್ಯಾದಿ. 
2. ತಲೆ ತರಿದ ಅಕ್ಷರಗಳಂತೆ-ಕ್ಕ, ಡ್ಡ, ದ್ಧ, ಇತ್ಯಾದಿ. 
3. ಹೋಲಿಕೆಯೇ ಇಲ್ಲದ-ತ್ತ, ಮ್ಮ, ಯ್ಯ, ಇತ್ಯಾದಿ. 
ಒಬ್ಬ ಕನ್ನಡ ಕಲಿಕೆದಾರನು ಎಲ್ಲ ಒತ್ತಕ್ಷರ (25+9) ಗಳನ್ನು ಕಲಿಯಬೇಕು. ಅವನೇನಾದರೂ ಈ ಒತ್ತಕ್ಷರಗಳು ಏಕೆ ಬೇರೆ ಬೇರೆ ರೀತಿಯಾಗಿವೆ ಎಂದು ಕೇಳಿದರೆ ನಮ್ಮಲ್ಲಿ ಯಾವ ಉತ್ತರವೂ ಇಲ್ಲ. ಬದಲಿಗೆ ಅರ್ಧಾಕ್ಷರಗಳನ್ನು ಬಳಸಿದರೆ ಈ ಪ್ರಶ್ನೆಯೇ ಬರುವುದಿಲ್ಲ. ಅಲ್ಲದೆ, ಕನ್ನಡ ಕಲಿಕೆ ಸುಲಭ ಆಗಬಹುದಲ್ಲವೆ? ಕನ್ನಡ ಪದಗಳನ್ನು ಹೇಳಿದಂತೆ ಬರೆಯ ಬಹುದಲ್ಲವೆ? ಉದಾ: ಆಮ್‌ಲ, ಕಷ್‌ಟ, ಕ್‌ಲೇಷ, ಇತ್ಯಾದಿ. ಇದರಿಂದ (25+9) ಒತ್ತಕ್ಷರಗಳನ್ನು ಕಲಿಯುವ ಪ್ರಮೇಯ ಬರುವುದಿಲ್ಲ, ಹೌದಲ್ಲವೆ? 
2. ಮಹಾಪ್ರಾಣಗಳ ಸುಧಾರಣೆ. 
ಹಾಗೆಯೇ, ತಮಿಳಿನಲ್ಲಿ ಮಹಾಪ್ರಾಣಗಳಿಲ್ಲ. ಕನ್ನಡದಲ್ಲಿ ಮಹಾಪ್ರಾಣಗಳ ಅವಶ್ಯಕತೆಯಿದೆ. ಉದಾ: ‘ಧನ’ ತೆತ್ತು ‘ದನ’ ತಂದ, ಎಂಬ ವಾಕ್ಯದಲ್ಲಿ ಎರಡೂ ‘ದ’ಗಳು ಅಲ್ಪಪ್ರಾಣವಾಗಿದ್ದರೆ ಖರೀದಿಗೋ ಅಥವ ವಿನಿಮಯಕ್ಕೋ ಎಂಬ ಅನುಮಾನ ಕಾಡದಿರದೆ? ಕನ್ನಡದಲ್ಲಿ ಈಗಿರುವ ಮಹಾಪ್ರಾಣಗಳನ್ನು ಹೇಗೆ ಬದಲಿಸಬಹುದೆಂಬುದಕ್ಕೆ ತೆಲುಗು ಅಕ್ಷರವೊಂದರಿಂದ ಪ್ರೇರಣೆ ಯಾಯಿತು. ಕನ್ನಡದ “ಖ” ಮತ್ತು "ಚ" ಅಕ್ಷರಗಳಿಗೆ ತೆಲುಗಿನಲ್ಲಿ ಲಂಗೋಟಿ ಕಟ್ಟಿ ಮಹಾಪ್ರಾಣವಾಗಿಸಿದ್ದಾರೆ. ಅದೇ ರೀತಿ ಕನ್ನಡದಲ್ಲಿ ಅಲ್ಪಪ್ರಾಣಗಳಿಗೆ ಲಂಗೋಟಿ ಕಟ್ಟಿ (ಅಂದರೆ ಹೊಟ್ಟೆ ಸೀಳಿ ಅಥವ ಪುಟ್ಟಿ ಸೀಳಿ) ಅವುಗಳನ್ನು ಮಹಾಪ್ರಾಣ ಮಾಡಬಹುದಲ್ಲವೆ? ಈಗಾಗಲೇ "ಡ, ದ, ಪ, ಬ" ಗಳಿಗೆ ಲಂಗೋಟಿ ಕಟ್ಟಿ "ಢ, ಧ, ಫ, ಭ" ಮಾಡಿದ್ದೇವೆ. ಅದರಂತೆ "ಕ, ಗ, ಚ, ಜ, ಟ, ತ" ಗಳಿಗೂ ಲಂಗೋಟಿ ಕಟ್ಟಿ ಮಹಾಪ್ರಾಣಗಳನ್ನು ಮಾಡಬಾರದು? ಲಿಪಿ ಇರುವುದು ನಮಗಾಗಿ ಅಲ್ಲವೆ? ನಮ್ಮ ಅನುಕೂಲಕ್ಕಲ್ಲವೆ? ಇದರಿಂದ ಮಹಾಪ್ರಾಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಕ್ಷರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ (39ಕ್ಕೆ). ಅಲ್ಲದೆ, ಅಲ್ಪಪ್ರಾಣ, ಮಹಾಪ್ರಾಣಗಳನ್ನು ಪರ್ಯಾಯವಾಗಿ ಬಳಸಬಹುದು. ಕಥೆ <> ಕತೆ, ಘಂಟೆ <> ಗಂಟೆ, ಕಂಭ <> ಕಂಬ, ಇತ್ಯಾದಿ. ಇದರಿಂದಾಗಿ ಕಲಿಯಲು ಸುಲಭ, ಬರೆಯಲು ಸರಳ, ಓದಲು ನಿರಾಳ. 
ಅಂದ ಹಾಗೆ . . . 
 ಇದೇ ತಾಣದಲ್‌ಲಿ ಇದನ್‌ನು ಟೈಪಿಸಬಲ್‌ಲ "Azhagi-Vinoda" ತಂತ್‌ರಾಂಶವೂ ಉಂಟು. ಅದನ್‌ನು ಡೌನ್‌ಲೋಡ್ ಮಾಡಿಕೊಂಡು ಉಪ್‌ಯೋಗಿಸಿಕೊಳ್‌ಳ ಬಹುದು. ಪಠ್‌ಯದ ಈ ಭಾಗವನ್‌ನು ಅದೇ ತಂತ್‌ರಾಂಶ ಬಳಸಿ ಟೈಪಿಸಲಾಗಿದೆ. ಗಮನಿಸಿ! ಇಲ್‌ಲಿ ಯಾವುದೇ ಬಗೆಯ ಒತ್‌ತಕ್‌ಷರಗಳಿಲ್‌ಲ. ಮಹಾಪ್‌ರಾಣಗಳನ್‌ನು ಹಾಗೆಯೇ ಉಳಿಸಿಕೊಳ್‌ಳ ಲಾಗಿದೆ. 
ಕೆಲವು ಪದಗಳು ಹೀಗಿವೆ: 
ಪೋಖ್‌ರಾನ್, ಉದ್‌ಘೋಷ, ಉಚ್‌ಛಾಟನೆ, ವಾಗ್‌ಝರಿ, ಬಲಿಷ್‌ಠ, ಪಥ್‌ಯದನ್‌ನ. 
--ooOoo--